ಜಾರ್ಜ್ (ಬ್ರಿಟನ್ನಿನ) - 
ಜಾರ್ಜ್ 1 : 1660-1727. ಗ್ರೇಟ್ ಬ್ರಿಟನ್ನಿನ ದೊರೆ (1714-1727). ತಂದೆ ಅರ್ನೆಸ್ಟ್ ಆಗಸ್ಟಸ್, ಇವನು 1692ರಿಂದ ಹ್ಯಾನೋವರ್‍ನ ಚುನಾಯಕ ಆಗಿದ್ದ. ತಾಯಿ ಸೋಫಿಯ. ಈಕೆ ಇಂಗ್ಲೆಂಡಿನ ದೊರೆಯಾಗಿದ್ದ 1ನೆಯ ಜೇಮ್ಸ್‍ನ ಮೊಮ್ಮಗಳು. ಜಾರ್ಜ್ 1660ರಲ್ಲಿ ಜನಿಸಿದ. ಸೋಫಿಯ ಡೊರೊತಿಯಳನ್ನು 1682ರಲ್ಲಿ ಮದುವೆಯಾದ. ಪತ್ನಿಯ ಶೀಲದಲ್ಲಿ ಅವನಿಗೆ ಸಂಶಯ ಬಂತು. ಅವಳ ಪ್ರೇಮಿ ಎಂದು ಹೇಳಲಾದವನು ಕೊಲೆಗೆ ಈಡಾದ. ಜಾರ್ಜ್ ಸೋಫಿಯಳೊಂದಿಗೆ ವಿವಾಹ ವಿಚ್ಚೇದನ ಮಾಡಿಕೊಂಡು ಅವಳನ್ನು ಬಂಧನಕ್ಕೆ ಒಳಪಡಿಸಿದ.

1698ರಲ್ಲಿ ತಂದೆಯ ಸ್ಥಾನದಲ್ಲಿ ಚುನಾಯಕನಾಗಿ ಬಂದ ತರುಣದಲ್ಲೇ ಫ್ರಾನ್ಸಿನ ಎದುರಾಳಿಗಳ ಬಣದಲ್ಲಿ ಸೇರಿಕೊಂಡು ಯುದ್ಧದಲ್ಲಿ ಭಾಗವಹಿಸಿದ. ಆ ಸೈನ್ಯದ ದಂಡನಾಯಕತ್ವ ಪಡೆದ (1707). ಆದರೆ ಒಕ್ಕೂಟದವರು ಅಸೂಯೆಪಟ್ಟಾಗ ರಾಜೀನಾಮೆಯನ್ನಿತ್ತ. ರಾಣಿ ಆನ್ ತೀರಿಕೊಂಡಾದ (1714) ಬ್ರಿಟನ್ನಿನ ಸಿಂಹಾಸನಕ್ಕೆ ಅವನು ಉತ್ತರಾಧಿಕಾರಿಯಾದ. ಅದೇ ವರ್ಷ ಜಾರ್ಜ್‍ಗೆ ವೆಸ್ಟ್‍ಮಿನ್‍ಸ್ಟರ್‍ನಲ್ಲಿ ಪಟ್ಟವಾಯಿತು.

ಬ್ರಿಟನ್ನಿನ ದೊರೆಯಾದ ಮೇಲೆ ಅವನು ವಿಗ್‍ಗಳ ಮೇಲುಗೈ ಇದ್ದ ಮಂತ್ರಿಮಂಡಲವನ್ನು ಸ್ಥಾಪಿಸಿದ. ವಿಗ್‍ಗಳು ಟೋರಿಗಳನ್ನು ಬಹಿಷ್ಕರಿಸಿದರು. ಇದರಿಂದ ಅಸಮಾಧಾನ ಬೆಳೆಯಿತು. ಟೋರಿ ಪ್ರಮುಖರು ಬಂಧನಕ್ಕೊಳಗಾದರು. ಕೆಲವರು ಓಡಿಹೋದರು. ಜಾಕೊಬೈಟ್‍ಗಳು ದಂಗೆ ಎದ್ದರು (1715). ಅದನ್ನು ಅಡಗಿಸಲಾಯಿತು. 1719ರಲ್ಲಿ ಅವರು ಮತ್ತೆ ಆಕ್ರಮಣ ಯತ್ನ ನಡೆಸಿ ವಿಫಲವಾದರು.

ಜಾರ್ಜನಿಗೂ ಅವನ ಮಗನಿಗೂ ನಡುವೆ ವಿರಸ ಬೆಳೆಯಿತು. ವಿಗ್‍ಗಳಲ್ಲಿ ಒಡಕುಂಟಾಯಿತು. ಜಾರ್ಜನಿಗೆ ಬ್ರಿಟಿಷರಲ್ಲಿ ಅಭಿಮಾನ ಇರಲಿಲ್ಲವೆಂದೂ ತನ್ನ ಉಪಪತ್ನಿಯರೊಂದಿಗೆ ಅವನು ಕಾಲ ಕಳೆಯುತ್ತಿದ್ದನೆಂದೂ ಹೇಳಲಾಗಿದೆ. ಆದರೆ ಇವನು ಆಡಳಿತ ವ್ಯವಹಾರಗಳಲ್ಲಿ ಬುದ್ಧಿವಂತನಾಗಿದ್ದ. ಸೌತ್ ಸೀ ಬಬಲ್ ಎಂಬ ಸಟ್ಟಾ ವ್ಯವಹಾರ ಮುರಿದು ಬಿದ್ದದ್ದು ಇವನ ಕಾಲದಲ್ಲಿ. ಸ್ಪ್ಯಾನಿಷ್ ಅಮೆರಿಕದೊಂದಿಗೆ ಲಾಭದಾಯಕ ವ್ಯಾಪರ ಮಾಡುವ ಉದ್ದೇಶದಿಂದ ಸ್ಥಾಪಿತವಾಗಿದ್ದ ಸೌತ್ ಸೀ ಕಂಪನಿ ಎಂಬ ಸಂಸ್ಥೆಯಲ್ಲಿ ಜಾರ್ಜನೂ ಅವನ ಉಪಪತ್ನಿಯರೂ ಹ್ಯಾನೊವರಿಯನ್ ಬಂಧುಗಳೂ ಬಂಡವಾಳ ಹೂಡಿದ್ದರು. ಆ ಬುರುಗುವ್ಯವಹಾರ ಸಂಸ್ಥೆ ಮುರಿದು ಬಿದ್ದಾಗ ಇವರು ನಷ್ಟಕ್ಕೊಳಗಾದರು. ಬ್ರಿಟನ್ನಿನಲ್ಲಿ ಹಣಕಾಸಿನ ಮುಗ್ಗಟ್ಟು ಸಂಭವಿಸಿತು. ಈ ರಾಜವಂಶದ ಭವಿಷ್ಯವೇ ನಾಶವಾಗುವ ಭಯ ಉಂಟಾಗಿತ್ತು.

ಜಾರ್ಜ್ ಸಾಮಾನ್ಯ ಅಭಿರುಚಿಯುಳ್ಳವನಾಗಿದ್ದ. ಸ್ವತಃ ಧೈರ್ಯಸ್ಥನಾದ ಅವನು ವಿವೇಕಯುತವಾದ ವಿಚಕ್ಷಣೆಯುಳ್ಳವನಾಗಿದ್ದ. ಇಂಗ್ಲಿಷ್ ಪ್ರಭುತ್ವಕ್ಕಿಂತ ಜರ್ಮನ್ ಪ್ರಭುತ್ವದ ಆಡಳಿತವನ್ನು ಹೆಚ್ಚಾಗಿ ಗಮನಿಸುತ್ತಿದ್ದುದು, ಅವನ ಜರ್ಮನ್ ಮಂತ್ರಿಗಳ ದುರಾಸೆ-ಇವುಗಳಿಂದಾಗಿ ಅವನು ಇಂಗ್ಲಿಷರ ಪ್ರೀತಿಯನ್ನು ಕಳೆದುಕೊಂಡಿದ್ದ. ಅವನಿಗೆ ಇಂಗ್ಲಿಷ್ ಭಾಷೆ ಬಾರದಿದ್ದುದರಿಂದ ಮಂತ್ರಿಮಂಡಲದ ಸಭೆಯ ಅಧ್ಯಕ್ಷತೆ ವಹಿಸುವುದು ಕಷ್ಟವಾಯಿತು. ಇದರಿಂದಾಗಿ ಇಂಗ್ಲೆಂಡಿನಲ್ಲಿ ಸಂಪುಟ ಆಡಳಿತ ಪದ್ಧತಿ ಜಾರಿಗೆ ಬಂತು. ಅವನು 1727ರಲ್ಲಿ ಮರಣ ಹೊಂದಿದ.

ಜಾರ್ಜ್ 2: 1683-1760. ಒಂದನೆಯ ಜಾರ್ಜನ ಮಗ. 1683ರಲ್ಲಿ ಜನಿಸಿದ. ತಂದೆಯ ಮರಣಾನಂತರ 1727ರಲ್ಲಿ ಪಟ್ಟಕ್ಕೆ ಬಂದ. 1705ರಲ್ಲಿ ಕ್ಯಾರೊಲಿನಳನ್ನು ವಿವಾಹದ. ತಂದೆಗೂ ಇವನಿಗೂ ಯಾವುದರಲ್ಲೂ ಒಮ್ಮತವಿರಲಿಲ್ಲ. ಇವನು ಪಟ್ಟಕ್ಕೆ ಬಂದ ಮೇಲೆ ತನ್ನ ತಂದೆಯ ಮಂತ್ರಿಗಳನ್ನು ವಜ ಮಾಡಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ರಾಣಿ ಸೂಕ್ತ ಬುದ್ಧಿವಾದ ನೀಡಿದಳು. ವಾಲ್‍ಪೋಲ್, ಟೌನ್‍ಷೆಂಡ್ ಮುಂತಾದವರು ಅಧಿಕಾರದಲ್ಲಿ ಮುಂದುವರಿದರು. ವಾಲ್‍ಪೋಲ್‍ಗೂ ಜಾರ್ಜನಿಗೂ ನಡುವೆ ಉದ್ದಕ್ಕೂ ಸೌಹಾರ್ದಯುತ ಸಂಬಂಧ ಉಳಿಯಿತು.

ಜಾರ್ಜ್ ಸಾಮಾನ್ಯ ಸಾಮಥ್ರ್ಯ ಉಳ್ಳವನೂ ಜಾಗರೂಕನೂ ಆಗಿದ್ದನಾದರೂ ವಿಜ್ಞಾನ ಸಾಹಿತ್ಯಗಳಲ್ಲಿ ಅವನಿಗೆ ಅಷ್ಟು ಆಸಕ್ತಿ ಇರಲಿಲ್ಲ. ರಾಣಿ ಕ್ಯಾರೊಲಿನಳ ಪ್ರಭಾವ ಅವನ ಮೇಲೆ ಬಹಳ ಇತ್ತು. ಯುದ್ಧದಲ್ಲಿ ಸ್ವತಃ ಭಾಗವಹಿಸುತ್ತಿದ್ದ ಬ್ರಿಟಿಷ್ ದೊರೆಗಳಲ್ಲಿ ಅವನೇ ಕಡೆಯವನು.

ಜಾರ್ಜ್ 3: 1738-1820. ಎರಡನೆಯ ಜಾರ್ಜನ ಮೊಮ್ಮಗ. 1760ರಲ್ಲಿ ಪಟ್ಟಕ್ಕೆ ಬಂದ. ಅವನು ಸಮರ್ಥನೂ ಉದ್ಯೋಗಶೀಲನೂ ಪ್ರಾಮಾಣಿಕನೂ ಆಗಿದ್ದ. ಆದರೆ ಹಟಮಾರಿ, ಸಮಯೋಪಾಯ ಅರಿಯದವ. ನಾಮಮಾತ್ರಕ್ಕೆ ರಾಜನಾಗಿರದೆ ನಿಜವಾಗಿಯೂ ದೊರೆಯಂತಿರಬೇಕೆಂದು ಅವನ ತಾಯಿ ಪ್ರೋತ್ಸಾಹಿಸಿದಳು. ಆದರೆ ಜಾರ್ಜ್ ನಿರಂಕುಶ ಅಧಿಪತಿಯಾಗಿ ಇರಲು ಇಷ್ಟಪಡದೆ ಸಂವಿಧಾನಕ್ಕೆ ವಿಧೇಯನಾಗಿ ನಡೆದುಕೊಂಡ. ಅವನ ಆಳ್ವಿಕೆಯ ಕಾಲದಲ್ಲಿ ಸುಮಾರು ಆರು ಮಂತ್ರಿಮಂಡಲಗಳು ರಚಿಸಲ್ಪಟ್ಟವು. ಇವುಗಳಲ್ಲಿ ಕಿರಿಯ ಪಿಟ್ ಮಂತ್ರಿಮಂಡಲದ ಸಾಧನೆ ಬ್ರಿಟಿಷ್ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ.

ಅವನ 60 ವರ್ಷಗಳ ದೀರ್ಘ ಆಡಳಿತದ ಪ್ರಮುಖ ಘಟನೆಗಳೆಂದರೆ ಅಮೆರಿಕ ಸ್ವಾತಂತ್ರ್ಯಯುದ್ಧ, ನೆಪೋಲಿಯನನೊಂದಿಗೆ ಕದನಗಳು ಮತ್ತು ಕೈಗಾರಿಕಾ ಕ್ರಾಂತಿ. ಬ್ರಿಟನ್ನಿನ ವಸಾಹತಾಗಿದ್ದ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಬ್ರಿಟನ್ ವಿಧಿಸುತ್ತಿದ್ದ ತೆರಿಗೆಗಳ ವಿರುದ್ಧ ಪ್ರಾರಂಭವಾದ ಚಳವಳಿ, ಅದರ ಸ್ವಾತಂತ್ರ್ಯದಲ್ಲಿ ಪರ್ಯವಸಾನವಾಯಿತು. ಬ್ರಿಟನನ್ನು ಪರಾಜಯಗೊಳಿಸಬೇಕೆಂದು ಸಂಕಲ್ಪ ತೊಟ್ಟ ನೆಪೋಲಿಯನ್ ಅಂತ್ಯದಲ್ಲಿ ಪರಾಜಯ ಹೊಂದಿದ. ಕೈಗಾರಿಕಾ ಕ್ರಾಂತಿ ಯಂತ್ರಯುಗಕ್ಕೆ ನಾಂದಿಯಾಯಿತು. ಬಟ್ಟೆಯ ಗಿರಣಿ ಹಾಗೂ ಸಾರಿಗೆ ಸಂಪರ್ಕದ ಮೇಲೆ ಈ ಕ್ರಾಂತಿ ಮಹತ್ತರ ಪರಿಣಾಮ ಬೀರಿತು. ಮಿಗಿಲಾಗಿ ಈ ಕ್ರಾಂತಿ ಚಕ್ರಾಧಿಪತ್ಯ ಸ್ಥಾಪನೆಗೆ ಉತ್ತೇಜನ ನೀಡಿತು. 1810ರಲ್ಲಿ ಜಾರ್ಜ್ ಮತಿಭ್ರಮಣೆಗೆ ಒಳಗಾಗಿ ಮುಂದಿನ ಹತ್ತು ವರ್ಷಗಳ ಕಾಲ ಅದೇ ಸ್ಥಿತಿಯಲ್ಲಿ ಬದುಕಿದ್ದ.

ಜಾರ್ಜ್ 4 : 1762-1830. ಮೂರನೆಯ ಜಾರ್ಜನ ಮಗ. 1762ರಲ್ಲಿ ಜನಿಸಿದ. ಹದಿನೇಳನೆಯ ವರ್ಷದಿಂದಲೂ ಇವನಿಗೆ ಹೆಣ್ಣು ಮತ್ತು ಮದ್ಯಗಳ ಚಟವಿತ್ತು. ಇವನು ಅನೇಕ ಸ್ತ್ರೀಯರನ್ನು ಮೋಹಿಸಿದ. ವಿಧವೆಯೊಬ್ಬಳನ್ನು ರಹಸ್ಯವಾಗಿ ವಿವಾಹವಾದ. ಆ ಮದುವೆ ಊರ್ಜಿತವಾಗಲಿಲ್ಲ. ಆದರೆ ಸಂತಾನಪ್ರಾಪ್ತಿಯಾಯಿತು. ದೊರೆಯ ಒತ್ತಾಯದ ಮೇಲೆ, ಅವನ ಆಯ್ಕೆಯ ಹೆಣ್ಣೊಬ್ಬಳನ್ನು ಮದುವೆಯಾದ. ಆದರೆ ಅದು ಪ್ರೇಮರಹಿತ ಸಂಬಂಧ. 1810ರಲ್ಲಿ ತಂದೆ ಮತಿವಿಕಲನಾದಾಗ ನಾಲ್ಕನೆಯ ಜಾರ್ಜ್ ರಾಜಪ್ರತಿನಿಧಿಯಾಗಿ, ಅವನು ಮರಣಿಸಿದಾಗ ದೊರೆಯಾದ (1820). 1830ರಲ್ಲಿ ಇವನು ತೀರಿಕೊಂಡ.

ಜಾರ್ಜ್ 5 : 1865-1936. 1910ರಿಂದ 1936ರವರೆಗೆ ಬ್ರಿಟನ್ನಿನ ದೊರೆ. ಜನನ 1865ರಲ್ಲಿ. ಆಗ ವೇಲ್ಸ್ ರಾಜಕುಮಾರನಾಗಿದ್ದು ಅನಂತರ 7ನೆಯ ಎಡ್ವರ್ಡ್ ಆದ ಆಲ್ಬರ್ಟ್ ಎಡ್ವರ್ಡ್‍ನ ಎರಡನೆಯ ಮಗ. 1865ರ ಜೂನ್ 3ರಂದು ಜನನ. 1892ರಲ್ಲಿ ಅಣ್ಣ ತೀರಿಕೊಂಡಾಗ ಇವನೇ ಸಿಂಹಾಸನಕ್ಕೆ ಉತ್ತರಾಧಿಕಾರಿಯಾದ. ಟೆಕ್‍ನ ವಿಕ್ಟೋರಿಯ ಮೇರಿ ರಾಜಕುಮಾರಿಯನ್ನು ಇವನು ಮದುವೆಯಾದ್ದು 1893ರಲ್ಲಿ. 1910ರಲ್ಲಿ 7ನೆಯ ಎಡ್ವರ್ಡ್ ಕಾಲವಾದ. ಇವನು ಐದನೆಯ ಜಾರ್ಜ್ ಆಗಿ ಸಿಂಹಾಸನವೇರಿದ. 1911ರಲ್ಲಿ ಇವನ ಪಟ್ಟಾಭಿಷೇಕವಾಯಿತು. ಇವನ ಕಾಲದಲ್ಲಿ ಲಾಡ್ರ್ಸ್ ಸಭೆಯ ಅಧಿಕಾರವನ್ನು ಕಡಿಮೆ ಮಾಡಲಾಯಿತು. ಐರ್ಲೆಂಡಿನ ಸ್ವರಾಜ್ಯ ಚಳವಳಿ ತೀವ್ರವಾಯಿತಾದರೂ ಅದರ ಭವಿಷ್ಯ ಇತ್ಯರ್ಥವಾಗಲಿಲ್ಲ. 1935ರಲ್ಲಿ ಇವನ ಪಟ್ಟಾಭಿಷೇಕದ ರಜತೋತ್ಸವವನ್ನು ಆಚರಿಸಲಾಯಿತು. ಭಾರತದ ಚಕ್ರವರ್ತಿಯೂ ಆಗಿದ್ದ ಇವನು ಪಟ್ಟಾಭಿಷಿಕ್ತನಾದ ವರ್ಷ ದೆಹಲಿಗೂ ಬಂದು ದರ್ಬಾರ್ ನಡೆಸಿದ. ಜಾರ್ಜ್ ಗತಿಸಿದ್ದು 1936ರ ಜನವರಿ 20ರಂದು.

ಜಾಜ್ 6: 1895-1952. ಐದನೆಯ ಜಾರ್ಜನ ಎರಡನೆಯ ಮಗ. ಅಣ್ಣ 3ನೆಯ ಎಡ್ವರ್ಡ್ ಸಿಂಹಾಸನ ತ್ಯಾಗ ಮಾಡಿದಾಗ ಬ್ರಿಟನ್ನಿನ ದೊರೆಯಾದ (1936). ಇವನ ಪಟ್ಟಾಭಿಷೇಕವಾದ್ದು 1937ರಲ್ಲಿ. ಪತ್ನಿ ಎಲಿಜûಬೆತ್ ಬೌಯೆಸ್-ಲೈಯನ್. ಜಾರ್ಜ್ ಪತ್ನಿಸಮೇತನಾಗಿ 1939ರಲ್ಲಿ ಕೆನಡ, ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಸಂಚರಿಸಿದ. ಇವನ ದೊರೆತನದ ಕಾಲದಲ್ಲಿ ಎರಡನೆಯ ಮಹಾಯುದ್ಧ ಸಂಭವಿಸಿತು (1939-45); ಭಾರತ ಸ್ವತಂತ್ರವಾಯಿತು (1947). 1952ರ ಫೆಬ್ರುವರಿ 6ರಂದು ಇವನು ತೀರಿಕೊಂಡ. ಎಲಿಜûಬೆತ್, ಮಾರ್ಗರೆಟ್ ರೋಸ್-ಇವರು ಇವನ ಪುತ್ರಿಯರು. ಜಾರ್ಜನ ಮರಣಾನಂತರ 2ನೆಯ ಎಲಿಜûಬೆತ್ ರಾಣಿಯಾದಳು.						(ಎಚ್.ವಿ.ಎಸ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ